ಔಲಿಯಾ ಪ್ರಪಂಚದ ನೇತಾರ

ಅಶೈಕ್ ಮುಹಿಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ಖ.ಸಿ).
〰️〰️〰️〰️〰️〰️〰️〰️〰️ 〰️〰️〰️〰️〰️〰️

ಔಲಿಯಾ ಪ್ರಪಂಚದ ನೇತಾರ
     ವಿಶ್ವನ್ನೇ ವಿಸ್ಮಯಗೊಳಿಸಿದ ಕರಾಮತ್‌ಗಳ ಸರದಾರ,
ಅಖ್ತಾಬ್‌‌ಗಳ ಪರಮೋನ್ನತ ನಾಯಕ, ಅಶೈಕ್ ಮುಹಿಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ರ.ಅ).ರಬೀವುಲ್ ಆಖಿರ್ ಶೈಕ್ ಜೀಲಾನಿ (ಖ.ಸಿ) ರವರ ತಿಂಗಳು. ಅವರ ಸ್ಮರಣೆ, ಅಧ್ಯಯನ, ಚರಿತ್ರಾ ಕಲಿಕೆ,ಅವರ ಮಹತ್ವಗಳನ್ನು ಸ್ಮರಿಸುವ ಪುಣ್ಯ ತಿಂಗಳು..
      ಅಲ್ಲಾಹುವಿನ ದ್ಸಿಕ್ರ್, ಸ್ಮರಣೆಯ ಮೂಲಕ ಮಹೋನ್ನತ ಸ್ಥಾನ ತಲುಪಿದ ಶೈಕ್ ಜೀಲಾನಿ (ಖ.ಸಿ) ರವರು ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ಪ್ರೇರಕರು.ಶೈಕ್ ಜೀಲಾನಿ ( ಖ.ಸಿ ) ರವರಿಗೂ ಮುಸ್ಲಿಮರಿಗೂ ಅಭೇಧ್ಯವಾದ ಸಂಬಂಧವಿದೆ.ಮುಸ್ಲಿಮರೆಡೆಯಲ್ಲಿ ಅವರಷ್ಟು ಸ್ವಾಧೀನವಿರುವ ಬೇರೆ ವಲಿಯ್ಯಗಳು ಇಲ್ಲವೆನ್ನಬಹುದು.
ಶೈಕ್ ಜೀಲಾನಿ (ಖ. ಸಿ) ರವರೊಂದಿಗೆ ಈ ಸಮುದಾಯಕ್ಕೆ ಪ್ರೀತಿ, ಸ್ನೇಹ, ಅಧ್ಯಾತ್ಮಿಕ ಸಂಬಂಧ ಬಲವಾಗಿ ಬೇರೂರಿದೆ.
  
     ಅವರನ್ನು ಸ್ಮರಿಸದ ಮುಸ್ಲಿಮರಿಲ್ಲ.ಅವರನ್ನು ನೆನಪಿಸದ ಮುಸ್ಲಿಂ ಮನೆಗಳಿಲ್ಲ.ಅವರನ್ನು ಚರ್ಚಿಸದ ವೇದಿಕೆಗಳಿಲ್ಲ.
ಅವರ ಮೇಲೆ ಫಾತಿಹಾ ಓದದ ಮುಸ್ಲಿಮರಿರಲಿಕ್ಕಿಲ್ಲ.
ಸಂಕಷ್ಟ ಸಂದರ್ಭದಲ್ಲಿ ಅವರನ್ನು ನೆನೆಯದ ಮುಸ್ಲಿಮರಿಲ್ಲ.
ಇದಕ್ಕೆಲ್ಲಾ ಕಾರಣ ಅವರ ದೀನಿ ದ‌ಅ್‌ವತ್ ಮತ್ತು ಕರಾಮತ್.ಅವರು ಆಧುನಿಕ ಇಸ್ಲಾಮಿನ ಜೀವಂತಿಕೆಗಾಗಿ ಕಠಿಣ ಪ್ರಯತ್ನ ನಡೆಸಿದ ಕಂಡರು*ನುಭಾವರು.
ಇದೇ ಕಾರಣವೇನೋ - ಮುಹ್ಯದ್ದೀನ್ ಮಾಲೆ, ರಾತೀಬ್, ಖುತುಬಿಯತ್ -ಮುಸ್ಲಿಮರೆಡೆಯಲ್ಲಿ ಜನಪ್ರಿಯವಾಯಿತು.

      ವಿಚಿತ್ರವೆಂದರೆ ಶೈಕ್ ಜೀಲಾನಿ(ಖ.ಸಿ) ಯವರ ವಫಾತಾದ ತಿಂಗಳಿನಂದೇ ಸುನ್ನೀಗಳ ಆಧ್ಯಾತ್ಮಿಕ ನಾಯಕರಾದ ತಾಜುಲ್ ಉಲಮಾ,ಕಣ್ಣಿಯತ್ ಉಸ್ತಾದ್, ಶಂಸುಲ್ ಉಲಮಾ,ನೂರುಲ್ ಉಲಮ, ಶೈಖುನಾ ಪಿ ಎ ಉಸ್ತಾದ್, ಶೈಖುನಾ ನೆಲ್ಲಿಕುತ್ತ್ ಉಸ್ತಾದ್ ಮುಂತಾದ ಉಲಮಾಗಳು ವಫಾತಾದರು.

ಜನನ

    ಶೈಕ್ ಜೀಲಾನಿಯವರು ಹಿ.470 ರಮಳಾನ್ ತಿಂಗಳಲ್ಲಿ ಜನಿಸಿದರು. ಹಿ.471 ಎಂಬ ಅಭಿಪ್ತಾಯವೂ ಇದೆ.
ಅವರು ಜನಿಸಿದ್ದು ಇರಾಕಿನ ರಾಜಧಾನಿಯಾದ ಟೆಹ್ರಾನಿನ ಪಶ್ಚಿಮ ದಿಕ್ಕಿನಲ್ಲಿರುವ ತಬರಿಸ್ಥಾನ್ ಎಂಬ ಗ್ರಾಮದ ಜೀಲಾನ್ ಎಂಬ ಸ್ಥಳದಲ್ಲಿ.
ಶೈಕ್ ಜೀಲಾನಿ (ಖ.ಸಿ) ರವರ ತಂದೆ ಮತ್ತು ತಾಯಿ ಇಬ್ಬರ ಪರಂಪರೆಯ ಮೂಲಕ ಪ್ರವಾದಿ‌‌‌ ﷺ  ರವರ ಬಳಿಗೆ ತಲುಪುತ್ತದೆ.
      ಮಾತಪಿತರಿಗೆ ಸ್ವಪ್ನದ ಮೂಲಕ ಲಭಿಸಿದ ನಿರ್ದೇಶ ಪ್ರಕಾರ ಅವರಿಗೆ ಅಬ್ದುಲ್ ಖಾದಿರ್ ಎಂಬ ಹೆಸರಿಡಲಾಯಿತು.ಚಿಕ್ಕಂದಿನಲ್ಲಿಯೇ ಶೈಕ್ ಜೀಲಾನಿಯವರು ಅದ್ಬುತ ಸಿದ್ದಿಗಳನ್ನು ತೋರಿಸಿದ್ದರು.

ಶಿಕ್ಷಣ ಮತ್ತು ಪ್ರಬೋಧನೆ

      ಶೈಕ್ ಜೀಲಾನಿಯವರ ಜೀವನಾವಧಿಯನ್ನು ಮೂರು ವಿಭಾಗವಾಗಿ ವಿಂಗಡಿಸಬಹುದು
ಒಂದು :- ಜನನದಿಂದ ಬಾಗ್ದಾದಿಗೆ ವಿದ್ಯಾಭ್ಯಾಸಕ್ಕೆ ಹೋಗುವ ವರೆಗಿನ ಕಾಲ.ಶೈಕ್ ರವರು ತನ್ನ 18 ನೇ ವರ್ಷದಲ್ಲಿ ಬಾಗ್ದಾದ್‌ಗೆ ತೆರಳಿದ್ದರು. ಈ ಅವಧಿಯಲ್ಲಿ ಅವರು ತಾಯಿಯವರ ಶಿಕ್ಷಣದಲ್ಲಿ ಬೆಳೆದರು. ಅವರೊಂದಿಗೆ ಹೊಲ ಗದ್ದೆಗಳಲ್ಲಿ ಕೃಷಿ ಮಾಡುತ್ತಿದ್ದರು.

ಎರಡು:- ಬಾಗ್ದಾದ್‌ನಲ್ಲಿ ಶಿಕ್ಷಣ ದಲ್ಲೂ, ರಿಯಾಳ (ಪರಿಶೀಲನೆ) ದಲ್ಲೂ ಕಳೆದ ಕಾಲ.ತನ್ನ 33 ವರ್ಷ ಅದಕ್ಕಾಗಿ ವ್ಯಯಿಸಿದರು.ಇದು ಶೈಕ್‌ರವರ ಜೀವನದ ಮಹತ್ವಪೂರ್ಣ ಕಾಲವಾಗಿತ್ತು. ಗುರಿ ಸಾಧನೆಗಾಗಿ ಅವರು ಸಹಿಸಿದ ತ್ಯಾಗ,ಅನುಭವಿಸಿದ ಕಷ್ಟ ಊಹಿಸಲು ಅಸಾಧ್ಯ.

ಮೂರು:- ಅಂದರೆ 51 ನೇ ವರ್ಷದಿಂದ ಮರಣ ಹೊಂದುವವರೆಗಿನ ಕಾಲ.ಈ ಅವಧಿಯಲ್ಲಿ ಅವರು ಮಾಡಿದ ಪ್ರಬೋಧನೆ,ದೀನಿ ದ‌ಅವತ್ ಇಸ್ಲಾಮಿನ ಸುವರ್ಣ ಯುಗವಾಗಿತ್ತು. ಲಕ್ಷಾಂತರ ಜನರು ಇಸ್ಲಾಮಿನೆಡೆಗೆ ಆಕರ್ಷಿತರಾದರು

ದಾಂಪತ್ಯ
   ಶೈಕ್ ಜೀಲಾನಿಯವರು (ಖ.ಸಿ) ತನ್ನ 51 ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದರು.ಅವರಿಗೆ ನಾಲ್ಕು ಪತ್ನಿಯರಲ್ಲಿ 27 ಗಂಡು,22 ಹೆಣ್ಣು ಮಕ್ಕಳು ಜನಿಸಿದರು.

ವಫಾತ್
      ಜಗತ್ತನ್ನು ವಿದ್ಯೆ ಹಾಗೂ ಆಧ್ಯಾತ್ಮಿಕ ಪ್ರಭೆಯಿಂದ ಬೆಳಗಿಸಿದ ಆ ಮಹಾನುಭಾವರು ಹಿ.561 ರಬೀವುಲ್ ಆಖಿರ್ 11 ರಂದು ವಫಾತಾದರು. ಆಗ ಅವರಿಗೆ 91 ವರ್ಷ,ಏಳು ತಿಂಗಳಾಗಿತ್ತು.

ಶೈಖ್ ಜೀಲಾನಿ ( ರ )'ರವರ ಬಾಲ್ಯದ ಕರಾಮತ್'ಗಳು

    ಶೈಖ್ ಜೀಲಾನಿ ( ರ ) ರವರು ಜನಿಸುವಾಗಲೇ ವಲಿಯ್ಯ್ ಎಂಬ ಪಟ್ಟವನ್ನು ಗಳಿಸಿದ್ದರು. ಶೈಖ್ ಜೀಲಾನಿ ( ರ )ರವರ ತಾಯಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ. ಸೀನಿದಾಗ ಅಲ್ ಹಮ್ದುಲಿಲ್ಲಾಹ್ ಎಂದು ಹೇಳಿದರೆ ಗರ್ಭಾಶಯದಲ್ಲಿರುವ ಮಗು ಗೌಸುಲ್ ಆಝಮ್ ರವರು. "ಯರ್'ಹಮ್ಕುಮುಲ್ಲಾಹ್" ಎಂದು ಉತ್ತರಿಸುತ್ತಿದ್ದರು.
(ಅಲ್ ಹಖಾಯಿಕ್ ಫಿಲ್ ಹದಾಯಿಖ್ ಪುಟ-139 )

    ಶೈಖ್ ಜೀಲಾನಿ ( ರ ) ರವರು ರಮಳಾನಿನ ಪ್ರಥಮ ದಿನ ಸೂರ್ಯೋದಯದ ಸಮಯದಲ್ಲಿ ಜನಿಸಿದರು.
ಜನಿಸಿದಾಗಲೇ ಅವರ ತುಟಿಯಿಂದ "ಅಲ್ಲಾಹ್..! ಅಲ್ಲಾಹ್" ಎಂಬ ಶಬ್ದವು ಹೊರಬರುತ್ತಿತ್ತು
(ಅಲ್ ಹಖಾಯಿಕ್ ಫಿಲ್ ಹದಾಯಿಖ್ ಪುಟ-139)

     ಶೈಖ್ ಜೀಲಾನಿ ( ರ ) ರವರು ಜನಿಸಿದ ದಿನವೇ ಸೂರ್ಯಾಸ್ತಮಾನ ವಾಗುವವರೆಗೆ ತನ್ನ ತಾಯಿಯ ಮೊಲೆಹಾಲನ್ನು ಕುಡಿಯಲಿಲ್ಲ. ರಮಳಾನಿನ ಎಲ್ಲಾ ದಿವಸಗಳಲ್ಲೂ ಇದೇ ರೀತಿ ಮಗು ಜೀಲಾನಿ ( ರ ) ರವರು ಉಪವಾಸ ಆಚರಿಸುತ್ತಿದ್ದರು.
( ಬಹಜತುಲ್ ಅಸ್ರಾರ್ ಪುಟ-17 ) 

      ಶೈಖ್ ಜೀಲಾನಿ ( ರ ) ರವರು ತನ್ನ 5 ನೇ ವಯಸ್ಸಿನಲ್ಲಿ ಪವಿತ್ರ ಕುರ್‌ಅನ್ ಪಠನ ಅಭ್ಯಸಿಸಲು ಗುರುವನ್ನು ಸಮೀಪಿಸಿದರು. ಉಸ್ತಾದ್ ಅಊದ್ಸು ಹೇಳಿ ಕೊಟ್ಟರು.
ಆಗ ಬಾಲಕ ಶೈಖ್ ಜಿಲಾನಿಯವರು ಅವೂದ್ಸು, ಬಿಸ್ಮಿ ಯೊಂದಿಗೆ ಖುರ್‌ಆನ್‌ನ ಒಂದರಿಂದ 18 ಜುಝುಅ್ ವರೆಗೆ ಕಾಣದೆ ಪಾರಾಯಣ ಮಾಡಿದರು.ಬಾಲಕ ಶೈಖ್ ಜೀಲಾನಿಯವರ ಈ ಅದ್ಭುತ ಬೆಳವಣಿಗೆಗೆ ಬೆಕ್ಕಸ ಬೆರಗಾದ ಉಸ್ತಾದರು ಮುಂದೆ ಓದುವಂತೆ ಹೇಳಿದರು. ಆದರೆ ಬಾಲಕ ಶೈಖ್ ಜೀಲಾನಿಯವರು ಹೇಳಿದರು.ಉಸ್ತಾದ್.. ನಾನು ತಾಯಿಯ ಗರ್ಭಾಶಯದಲ್ಲಿದ್ದಾಗಲೇ ತಾಯಿ 18 ಜುಝುಅ್‌ವರೆಗೆ ಖುರ್‌ಆನ್ ಪಾರಾಯಣ ಮಾಡಿದ್ದನ್ನು ಕೇಳಿ ನಾನು ಕಂಠಪಾಟ ಮಾಡಿದ್ದೆನು.ಆದರ ಆಚೆ ಕಂಠಪಾಠ ಮಾಡಲಿಲ್ಲ.ಯಾವಾಗಲಾದರೂ ಆಟ ಆಡಲು ಬಯಸಿದರೆ, 
ಶೈಖ್ ಜೀಲಾನಿ ( ರ )'ರವರಿಗೆ"ನಾವು ನಿನ್ನನ್ನು ಸೃಷ್ಟಿಸಿರುವುದು ಆಟವಾಡಲು ಅಲ್ಲ"
ಎಂಬ ದೈವೀಕ ಧ್ಬಣಿಯು ಕೇಳಿಸುತ್ತಿತ್ತು. 
(ಅಲ್ ಹಖೀಕಿ ಫಿಲ್ ಹದಾಯಿಖ್ ಪುಟ-140)
ಶೈಖ್ ಜೀಲಾನಿ ( ರ ) ರವರು ಮದರಸಕ್ಕೆಂದು ಹೋದಾಗ,
ಅಲ್ಲಾಹನ ಸ್ನೇಹಿತನಿಗೆ ಸ್ಥಳಾವಕಾಶ ನೀಡಿರಿ."
ಎಂಬ ಅಶರೀರವಾಣಿ ಕೇಳಿಸುತ್ತಿತ್ತು.
(ಬಹ್‌ಜತುಲ್ ಅಸ್ರಾರ್, ಪುಟ-48)

ಮಹೋನ್ನತ ವ್ಯಕ್ತಿತ್ವ

    ಹಾಫಿಳ್ ಮುಹಮ್ಮದ್ ಬ್ನ್ ಯೂಸುಫ್ ‌ಬರ್ಝಲಿ(ರ.ಅ) ಹೇಳುತ್ತಾರೆ:-ಶೈಖ್ ಅಬ್ದುಲ್ ಖಾದಿರ್ ಜೀಲಾನಿ(ರ.ಅ) ಬಾಗ್ದಾದ್‌ನಲ್ಲಿ ಶಾಫಿಈ, ಹಂಬಲೀ ವಿಭಾಗದ ವಿದ್ವತ್ ವಿದ್ವಾಂಸರು, ನೇತಾರರಾಗಿದ್ದರು. ವಿದ್ವತ್ ಜ್ಞಾನಿಗಳು, ಬಡವ-ಬಲ್ಲಿದರು, ಸಾಮಾನ್ಯ ವ್ಯಕ್ತಿಗಳು ಮುಂತಾದ ಎಲ್ಲರ ಮಧ್ಯೆ ಮಹೋನ್ನತ ಸ್ವೀಕಾರ ಪಡೆದ ವ್ಯಕ್ತಿತ್ವವಾಗಿತ್ತು ಅವರದ್ದು. ಅವರು ಪವಿತ್ರ ಇಸ್ಲಾಂ ಧರ್ಮದ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದರು, ಅಂದರೆ ಇಸ್ಲಾಂ ಧರ್ಮ ಪ್ರಚಾರ ಮಾಡಿದವರಲ್ಲಿ ಅಗ್ರಗಣ್ಯರು. ಮಹಾತ್ಮರಿಂದ ಸಾಮಾನ್ಯ ವ್ಯಕ್ತಿಗಳಿಗೆ, ‌ವಿಶೇಷ ವ್ಯಕ್ತಿಗಳಿಗೆ ಹಲವು ಪ್ರಯೋಜನ ಉಂಟಾಗಿದೆ. ಪ್ರಾರ್ಥನೆಗೆ ಉತ್ತರವಿರುವ ವ್ಯಕ್ತಿ, ಬಹು ಬೇಗನೆ ಕಣ್ಣೀರು ತುಂಬಿ ತುಳುಕಾಡಿಸುವವರು, ಸದಾ ವೇಳೆಯೂ ಅಲ್ಲಾಹನ ಸ್ಮರಣೆಯಲ್ಲಿ, ದ್ಸಿಕ್ರ್‌ಗಳಲ್ಲಿ ಕಾಲ ಕಳೆಯುವವರು, ಹೆಚ್ಚು ಹೊತ್ತು ಚಿಂತಿಸುವವರು, ಮೃದು ಮನಸ್ಕರು, ಸದಾ ಸಮಯ ಮುಖದಲ್ಲಿ ಮಂದಹಾಸ ಬೀರುವವರು, ಮಹಾ ಮನಸ್ಕರು, ಉದಾರಶೀಲರು, ಮಹಾ ವಿದ್ವಾಂಸರು, ಉತ್ಕೃಷ್ಟ ಸ್ವಭಾವದವರು, ಸುಗಂಧ, ಪರಿಮಳ ಹೊರ ಬರುವ ವ್ಯಕ್ತಿತ್ವ, ಕಠಿಣ ಪರಿಶ್ರಮಶಾಲಿ, ಆರಾಧನೆಯಲ್ಲಿ ಅತೀವ ಕಾಳಜಿ ಉಳ್ಳವರು ಮುಂತಾದ ಯಥೇಚ್ಛ ಗುಣಗಳು ಇರುವ ಮಹಾ ವ್ಯಕ್ತಿಯಾಗಿದ್ದಾರೆ ಶೈಖ್ ರವರು..
"[ಖಲಾಯಿದುಲ್ ಜವಾಹಿರ್: 06]

ಹಲಾಲ್ ಆಹಾರ

   ಶೈಖ್ ಜೀಲಾನೀ(ರ) ರವರು ವಿಶಾಸಮನಸ್ಕರು ಮತ್ತು ಉದಾರದಾನಿಗಳಾಗಿದ್ದರು. ಎಲ್ಲಾ ರಾತ್ರಿಗಳಲ್ಲೂ ಕೂಡಾ ಔತಣಕೂಟವೇರ್ಪಡಿಸಲು ತನ್ನ ಶಿಷ್ಯಂದಿರೊಂದಿಗೆ ಸೂಚಿಸುತ್ತಿದ್ದ ಮಹಾತ್ಮರು ,.ಬಡವರೊಂದಿಗೆ ಕುಳಿತುಕೊಂಡು ಆಹಾರ ಸೇವಿಸುತ್ತಿದ್ದರು.
      ಹಲಾಲ್ ಆದ ಆಹಾರವನ್ನೇ ಸೇವಿಸಬೇಕೆಂಬ ಉತ್ಕಟೇಚ್ಛೆಯಿಂದ ಅವರು ಗೋಧಿಯನ್ನು ಬೆಳೆಯುತ್ತಿದ್ದರು. ತನ್ನ ಶಿಷ್ಯಂದಿರೇ ಅದರಲ್ಲಿ ಕೃಷಿ ಮಾಡಿ ಫಸಲು ಪಡೆದು ರೊಟ್ಟಿಗಳನ್ನು ತಯಾರಿಸುತ್ತಿದ್ದದ್ದು. 
ಶೈಖ್ ರವರು ಅದನ್ನು ಅಗತ್ಯವಿರುವ ಎಲ್ಲರಿಗೂ ವಿತರಿಸುತ್ತಿದ್ದರು. ಮುಳಫ್ಫರ್ ಎಂಬ ಸೇವಕನನ್ನು ಮನೆ ಬಾಗಿಲಲ್ಲಿ ರೊಟ್ಟಿಯೊಂದಿಗೆ ಕುಳಿತು . 'ಅಗತ್ಯವಿರುವವರಿದ್ದರೆ ಬನ್ನಿ, ರೊಟ್ಟಿ ಪಡೆದುಕೊಳ್ಳಿ' ಎನ್ನಲು ಪ್ರತ್ಯೇಕವಾಗಿ ನೇಮಿಸಿದ್ದರು.(ಖಲಾಇದುಲ್ ಜವಾಹಿರ್)

ಅದೃಶ್ಯ ಜ್ಞಾನ

    ಮಹಾತ್ಮರಾದ ಅಹ್ಮದ್ ಬಿನು ಳಫರ್ ಬಿನು ಹುಬೈರ(ರ) ರವರು ಹೇಳುತ್ತಾರೆ:-"ಶೈಖ್ ಜೀಲಾನೀ(ರ) ರವರನ್ನು ಝಿಯಾರತ್ ಮಾಡಬೇಕೆಂಬ ಕೋರಿಕೆಯನ್ನು ನನ್ನ ಪಿತಾಮಹರೊಂದಿಗೆ ಹೇಳಿಕೊಂಡಾಗ, 
ಅವರು ಒಂದು ಹಿಡಿ ಚಿನ್ನದ ನಾಣ್ಯಗಳನ್ನು ನನಗೆ ನೀಡಿದರು. ನಾನು ಅದನ್ನು ಪಡೆದುಕೊಂಡು ಶೈಖ್ ಜೀಲಾನೀ(ರ) ರವರ ಝಿಯಾರತ್ತಿಗೆ ಹೊರಟೆ. ಶೈಖ್ ಜೀಲಾನಿ ( ರ ) ರವರು ಮಿಂಬರಿನಿಂದ ಇಳಿದೊಡನೆ ಆ ಗುಂಪಿನ ಮಧ್ಯೆಯೇ ಶೈಖ್ ರವರ ಬಳಿ ತೆರಳಿ ಸಲಾಂ ಹೇಳಿದೆ. 

     ಆಗ ಶೈಖ್ ರವರು ಅನಿರೀಕ್ಷಿತವಾಗಿ ಹೀಗೆ ಪ್ರತಿಕ್ರಿಯಿಸಿದರು. ನಿಮ್ಮಲ್ಲಿರುವ ನಾಣ್ಯಗಳನ್ನು ನೀವೇ ಹಿಡಿದುಕೊಳ್ಳಿ. ನಿಮ್ಮ ಪಿತಾಮಹರಿಗೆ ಅದನ್ನು ಹಾಗೆಯೇ ಮರಳಿಸಿ. .ಈ ಅಬ್ದುಲ್ ಖಾದರ್ ರವರಿಗೆ ಅವುಗಳ ಯಾವುದೇ ಅಗತ್ಯವಿಲ್ಲವೆಂದು ಹೇಳಿ. ಅವುಗಳನ್ನು ಅದರ ಹಕ್ಕುದಾರರಿಗೆ ನೀಡಲಿ!".(ಖಲಾಯಿದುಲ್ ಜವಾಹಿರ್)

ಮಲಕುಗಳು ಗೌರವಿಸುತ್ತಿದ್ದರು

ಶೈಖ್ ಅಬ್ದುಲ್ ರಝಾಕ್(ರ.ಅ) ಹೇಳುತ್ತಾರೆ:- ಒಂದು ದಿನ ನಾನು ಶೈಖ್ ಜೀಲಾನಿ(ರ.ಅ) ರಲ್ಲಿ ತಾವು ಅಲ್ಲಾಹನ ವಲಿಯ್ಯ್ ಎಂದು ಯಾವಾಗ ತಿಳಿದಿರೆಂದು ಕೇಳಿದಾಗ, 
ಮಹಾನರು ಈ ರೀತಿ ಉತ್ತರಿಸಿದರು.ನನಗೆ ಹತ್ತು ವರ್ಷ ಪ್ರಾಯವಿದ್ದಾಗ ನಾನು ಊರಿನಲ್ಲೇ ಇದ್ದೆ. ನಾನು ಮನೆಯಿಂದ ಮದರಸಗೆ ಹೋಗುತ್ತಿದ್ದೆ.ಆಗ ಮಲಕುಗಳು ಅಲ್ಲಿನ ಮಕ್ಕಳಲ್ಲಿ, ಮಕ್ಕಳೇ! ಅಲ್ಲಾಹನ ವಲಿಯ್ಯ್ ಗೆ ಕುಳಿತುಕೊಳ್ಳಲು ಸ್ಥಳಾವಕಾಶ ಮಾಡಿರಿ" ಎಂದು ನನ್ನ ಕುರಿತು ಹೇಳುವುದನ್ನು ನಾನು ಕೇಳುತ್ತಿದ್ದೆ.

     ಒಮ್ಮೆ ನನ್ನ ಬಳಿ ಒಬ್ಬ ಮಹಾತ್ಮರು ಬಂದರು. ‌ನನಗೆ ಅವರ ಪರಿಚಯವಿರಲಿಲ್ಲ. ಅವರು ಮೇಲಿನಂತೆ ಹೇಳುವುದನ್ನು ಕೇಳಿದರು, ಆಗ ಮಲಕುಗಳಲ್ಲಿ ಒಬ್ಬರೊಂದಿಗೆ ಅವರು ಕೇಳಿದರು, ಈ‌ ಮಗುವಿನ ವಿಶೇಷತೆಯೇನು ? ಆಗ ಮಲಕ್ ಹೇಳಿತು.
ಈ ಮಗುವಿನ ಸ್ಥಿತಿ ಅತ್ಯದ್ಭುತ. ಇದಕ್ಕೆ ಎಲ್ಲವನ್ನೂ ನೀಡಲಾಗುತ್ತೆ. ಯಾವುದಕ್ಕೂ ಕೊರತೆಯಿರಲ್ಲ. 
ಎಲ್ಲಾ ಸೌಕರ್ಯ ಒದಗಿಸಲಾಗುತ್ತದೆ. ಮೋಸವಿರಲ್ಲ. 

    ನಂತರ ನಲ್ವತ್ತು ವರ್ಷ ಬಳಿಕ ಆ‌ ಮಹಾತ್ಮರ ನ್ನು ನಾನು ಭೇಟಿಯಾದೆ. ನೋಡುವಾಗ ಅವರು ಆ ಕಾಲದ ಅಬ್ದಾಲ್ ಎಂಬ ಉನ್ನತ ಔಲಿಯಾಗಳ ವಿಭಾಗಕ್ಕೆ ಸೇರಿದ್ದರು." [ಬಹ್'ಜಾ: 21]

ತಿಂದ ಮೂಳೆಗಳಿಂದ ಒಂದು ಅಸಲಿ ಕೋಳಿ

    ಒಮ್ಮೆ ಮುಹ್ಯದ್ದೀನ್ ಶೈಖ್(ರ.ಅ) ರ ಬಳಿ ಒಬ್ಬಳು ತಾಯಿ ಮತ್ತು ಮಗ ಬಂದರು.ಶೈಖರ ಬಳಿ ಜ್ಞಾನ ಪಡೆದು ಅಲ್ಲಾಹನಿಗೆ ಸಮರ್ಪಿಸಲು ತಾಯಿ ಮಗನನ್ನು ಮಹಾನರ ಬಳಿ ಕರೆದುಕೊಂಡು ಬಂದಿದ್ದರು. ಶೈಖ್ ರವರು ಆ ಮಗುವನ್ನು ಸ್ವೀಕರಿಸಿ ಪೂರ್ವಿಕರ ಹಾದಿಯಲ್ಲಿ ಜೀವಿಸಲು ನಿರ್ದೇಶಿಸಿದರು. 

      ಸ್ವಲ್ಪ ಕಾಲ ಕಳೆದ ನಂತರ ತಾಯಿ ತನ್ನ ಮಗನನ್ನು ಕಾಣಲು ಬಂದರು.ಕಂಡಾಗಲೇ ದುಃಖ‌ ಉಮ್ಮಳಿಸಿ ಬಂತು. ಹಸಿವು ಕಾರಣ ಮಗ ತುಂಬಾ ಸೊರಗಿ ಹೋಗಿದ್ದ. ಮಗ ಆ ವೇಳೆ ಗೋಧಿ ರೊಟ್ಟಿ ತಿನ್ನುತ್ತಿದ್ದ. ಇದನ್ನು ನೋಡಿ ತಾಯಿ ಶೈಖ್ ರವರ ಬಳಿ ತೆರಳಿ ನೋಡಿದಾಗ,.ಶೈಖ್ ರವರು ರೊಟ್ಟಿ ಮತ್ತು ಕೋಳಿಯನ್ನು ತಿನ್ನುತ್ತಿದ್ದರು.ಸುಪ್ರದಲ್ಲಿ ಕೋಳಿಯ ಮೂಳೆಗಳಿದ್ದವು. 

     ಇದನ್ನು ನೋಡಿ ತಾಯಿ ಓ ಶೈಖ್‌ರವರೇ , ತಾವು ಕೋಳಿ ಮಾಂಸ ತಿನ್ನುತ್ತಿದ್ದೀರಿ. ನನ್ನ ಮಗ ಕೇವಲ ಒಣಗಿದ ರೊಟ್ಟಿ ಸೇವಿಸುತ್ತಿದ್ದಾನೆ.ಮಹಾತ್ಮರು ಒಂದು ಮಾತನ್ನೂ ಹೇಳದೆ, ಕೋಳಿಯ ಮೂಳೆಗಳ ಮೇಲೆ ಕೈಯಿಟ್ಟು , .ಅಲ್ಲಾಹನ ಅನುಮತಿ ಮೇರೆಗೆ ನೀ ಎದ್ದೇಳು."ಎಂದು ಹೇಳಿದ್ದೇ ತಡ, 
ಒಂದು ಪೂರ್ಣ ಕೋಳಿ ಕೂಗುತ್ತಾ ಹೊರಟು ಹೋಯಿತು. 
ನಂತರ ತಾಯಿಯಲ್ಲಿ ಹೇಳಿದರು, "ನಿಮ್ಮ ಮಗ ಈ ಸ್ಥಿತಿ ತಲುಪಿದರೆ ಅವನಿಗೆ ಇಷ್ಟವಿರುವುದನ್ನು ಅವನು ಸೇವಿಸಲಿ." 
[ಹಯಾತುಲ್ ಅಯವಾನ್/ದಮೀರಿ]

ಜ್ಞಾನದ ಆಳ

     ಒಮ್ಮೆ ಶೈಖ್ ಜೀಲಾನಿ(ರ.ಅ) ರ ತರಗತಿಯಲ್ಲಿ ಇಬ್ನುಲ್ ಜೌಝಿ(ರ) ಹಾಜರಾದರು. ಶೈಖ್ ರವರು ಅಂದು ಕುರ್'ಆನ್ ನ ಒಂದು ಶ್ಲೋಕಕ್ಕೆ ಹಲವಾರು ವ್ಯಾಖ್ಯಾನ ಹೇಳುತ್ತಿದ್ದರು. ಇಬ್ನುಲ್ ಜೌಝಿ(ರ) ಬಳಿಯಿದ್ದ ಒಬ್ಬರು , ಮಹಾತ್ನರಲ್ಲಿ ಪ್ರತಿ ವ್ಯಾಖ್ಯಾನ ಮುಗಿಯುವಾಗ ಈ ರೀತಿ ಕೇಳುತ್ತಿದ್ದರು, ಈ ವ್ಯಾಖ್ಯಾನ ನಿಮಗೆ ಮುಂಚೆಯೇ ಗೊತ್ತೇ? 
ಮಹಾನರು: ಹೌದು, ಗೊತ್ತು‌. ಹನ್ನೊಂದು ವ್ಯಾಖ್ಯಾನ ಹೇಳಿ ನಂತರವೂ ಹಲವಾರು ವ್ಯಾಖ್ಯಾನ ಹೇಳಿದರು. 
ಅದು ಸುಮಾರು ನಲ್ವತ್ತರಷ್ಟು ಆಯಿತು. ಒಂದೊಂದು ವ್ಯಾಖ್ಯಾನ ಹೇಳುವಾಗ ಆ ಅಭಿಪ್ರಾಯ ಯಾರು ಹೇಳಿದ್ದು ಎಂದೂ ಹೇಳುತ್ತಿದ್ದರು. ಇದು ಕೇಳಿ ಇಬ್ನುಲ್ ಜೌಝಿ(ರ) ಶೈಖ್‌ರವರ ಅಪಾರ ಜ್ಞಾನ ಕಂಡು ವಿಸ್ಮಯಚಕಿತರಾದರು."
 [ನೂರುಲ್ ಅಬ್ಸಾರ್: 360]

 ಮೊಲೆ ಹಾಲು ಕುಡಿಯಲಿಲ್ಲ.

       ಶೈಖ್ ಜೀಲಾನಿ ರಹ್ಮತುಲ್ಲಾಹಿ ಅಲೈಹಿ ರವರ ತಾಯಿಯಿಂದ: ನನ್ನ ಮಗ ಅಬ್ದುಲ್ ಖಾದಿರ್ ರಹ್ಮತುಲ್ಲಾಹಿ ಅಲೈಹಿ ಜನಿಸಿದಾಗ ರಮಳಾನ್ ತಿಂಗಳ ಹಗಲು ಸಮಯದಲ್ಲಿ ಮೊಲೆ ಹಾಲು ಕುಡಿಯುತ್ತಿರಲಿಲ್ಲ. ಒಂದು ಸಲ ಮೋಡ ಕವಿದ ಕಾರಣ ರಮಳಾನ್ ತಿಂಗಳ ಬಗ್ಗೆ ಅನಿಶ್ಚಿತತೆ ಇದ್ದಾಗ ಜನರು ನನ್ನ ಬಳಿ ಬಂದು ಮಗು ಹಾಲು ಕುಡಿಯುತ್ತಿದೆಯೇ ಎಂದು ವಿಚಾರಿಸಿದರು. ನಾನು ಇಲ್ಲ ಎಂದು ಉತ್ತರಿಸಿದೆನು. ಆ ಪ್ರಶ್ನಾರ್ಹ ದಿನವು ರಮಳಾನಿಗೆ ಸೇರಿದ್ದು ಎಂದು ನಂತರ ಅರಿವಾಯಿತು.ರಮಳಾನಿನ ಹಗಲು ಮೊಲೆ ಹಾಲು ಕುಡಿಯದ ಮಗು ಅಹ್ಲು ಬೈತ್ (ಮುತ್ತು ನೆಬಿ ﷺ ರ ಸಂತಾನದಲ್ಲಿ) ನಲ್ಲಿ ಜನಿಸಿದೆ ಎಂಬ ವಾರ್ತೆ ಎಲ್ಲೆಡೆ ಹಬ್ಬಿತು.

ಪ್ರವಾದಿ ﷺ ರನ್ನು ಕನಸಲ್ಲಿ ಕಂಡರು

    ಒಮ್ಮೆ ಳುಹ್ರ್ ನಮಾಝ್ ನಂತರ ಶೈಖ್ ಜೀಲಾನಿ ( ರ) ರವರು ನಬಿ ﷺ ರವರನ್ನು ಕನಸಲ್ಲಿ ದರ್ಶಿಸಿದರು.ಈ ವಿಷಯವನ್ನು ಶೈಖ್ ರವರು ಹೇಳುತ್ತಾರೆ ; ಒಮ್ಮೆ ಬಗ್ದಾದ್ ಮಸೀದಿಯಲ್ಲಿ ಳುಹ್ರ ನಮಾಜ್ ಮಾಡಿ ಕುಳಿತಿದ್ದೆ. ಅಲ್ಲಿಗೆ ನಿದ್ರೆ ಆವರಿಸಿತು.ಆಗ ಪುಣ್ಯ ಪ್ರವಾದಿ ﷺ ರವರು ಕನಸಲ್ಲಿ ಬಂದು ಕೇಳಿದರು" ಮಗನೇ ! ಯಾಕೆ ನೀನು ಜನರಿಗೆ ಪ್ರವಚನ ನೀಡುತ್ತಿಲ್ಲ ? " ನಾನು ಅನರಬಿ. ಬಗ್ದಾದಿನ ಶುದ್ಧ ಅರಬಿ ಭಾಷಿಕರ ಮುಂದೆ ನಾನು ಹೇಗೆ ಪ್ರವಚನ ನೀಡಲಿ ? ಎಂದು ನಾನು ಹೇಳಿದೆನು. 
       ಆಗ ನಬಿ ﷺ ರವರು ನನ್ನ ಬಾಯಿ ತೆರೆಯುವಂತೆ ಹೇಳಿದರು. ನಾನು ಬಾಯಿ ತೆರೆದೆ. ನಬಿ ﷺ ರವರು ನನ್ನ ನಾಲಗೆಗೆ ಏಳು ಬಾರಿ ತನ್ನ ಪವಿತ್ರ ಉಗುಳನ್ನು ಲೇಪಿಸಿದರು.  ಇನ್ನು ಜನರಿಗೆ ಉಪದೇಶ ಕೊಡು. ಅವರಿಗೆ ಸನ್ಮಾರ್ಗ ತೋರು ಎಂದು ಹೇಳಿದರು.ಅದರ ನಂತರ ಹ.ಅಲಿಯವರು ( ರ) ಬಂದು ನನ್ನ ನಾಲಗೆಗೆ ಆರು ಬಾರಿ ಉಗುಳು ಲೇಪಿಸಿದರು. ಏಳುಬಾರಿ ಲೇಪಿಸದಿರಲು ಕಾರಣವೇನು ಎಂದು ಕೇಳಿದೆ. ನಬಿ ﷺ ರವರ ಮೇಲಿನ ಗೌರವಕ್ಕಾಗಿ ಎಂದರು 
 
- ಇಮಾಮ್ ಸುಯೂಥೀ ( ರ) 
ಅಲ್ ಹಾವೀ: 2- 259.

➖➖➖➖➖➖➖➖ ➖➖➖➖

Comments

Popular posts from this blog

ಮೂಗುತಿ

ಖುರ್‌ಆನ್ ಹೇಳಿದ ಕರಾಮತ್

ಇಸ್ತಿಗಾಸ